ರಾಡ್ ಹಿಡಿದು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

ಉಡುಪಿ, ಜೂ.1: ಪೆರ್ಡೂರಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ದಿನಗಳಿಂದ ಕಬ್ಬಿಣದ ರಾಡ್ ಹಿಡಿದು ತಿರುಗಾಡುತ್ತಿದ್ದು ಆತಂಕ ಸೃಷ್ಟಿಸಿದ ವ್ಯಕ್ತಿಯನ್ನು ವಿಶು ಶೆಟ್ಟಿ, ಮತ್ತು ಸ್ಥಳೀಯರಾದ ಸತೀಶ್ ಆಚಾರ್ಯರವರ ಸಹಾಯದಿಂದ ವಶಕ್ಕೆ ಪಡೆದು ಹಿರಿಯಡ್ಕ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ, ಮಂಜೇಶ್ವರದ ದೈಗೋಳಿಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಶ್ರೀ ಸಾಯಿ ನಿಕೇತನದಲ್ಲಿ ದಾಖಲಿಸಿದ್ದಾರೆ .
ವ್ಯಕ್ತಿಯ ಹೆಸರು ನಂದ (48 ವ) ಎಂದಷ್ಟೇ ಮಾಹಿತಿ ನೀಡಿದ್ದಾರೆ. ತುಳು ಭಾಷೆ ಮಾತನಾಡುತ್ತಿದ್ದು ಕಳೆದ ಕೆಲವು ದಿನಗಳಿಂದ ಪೆರ್ಡೂರಿನ ದೂಪದಕಟ್ಟೆ ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಹಗಲು ತಿರುಗಾಡುತ್ತಾ ಒಮ್ಮೊಮ್ಮೆ ಉದ್ರಿಕ್ತನಾಗುತ್ತಾನೆ. ಈ ಬಗ್ಗೆ ಸ್ಥಳೀಯರು ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿದ್ದು, ಶಾಲಾರಂಭದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು ಎಂದು ವಿಷಯ ತಿಳಿಸಿದ್ದು ಕೂಡಲೇ ವಿಶು ಶೆಟ್ಟಿ ಕಾರ್ಯಾಚರಣೆ ನಡೆಸಿ,
ವ್ಯಕ್ತಿಯು ತುಳು ಭಾಷೆ ಮಾತನಾಡುವುದರಿಂದ ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯವರು ಆಗಿರಬಹುದು. ಸಂಬಂಧಿಕರು ಹಿರಿಯಡ್ಕ ಠಾಣೆ ಅಥವಾ ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಹರೀಶ್ ಉದ್ಯಾವರ, ಸ್ಪ್ಯಾನ್ಸಿ ಕೊರಂಗ್ರಪಾಡಿ, ಸಂದೇಶ್ ಉಚ್ಚಿಲ ಸಹಕರಿಸಿದರು.
