

ರಾಜ್ಯ ಸರ್ಕಾರ ಪ್ರತಿ ಪಡಿತರ ಅಂಗಡಿ ವ್ಯಾಪ್ತಿಯಲ್ಲಿ ಕನಿಷ್ಠ ಹತ್ತು ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಅಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಿ ಒತ್ತಡ ಹೇರುತ್ತಿದೆ. ಬಿಪಿಎಲ್ ಕಾರ್ಡ್ ಅರ್ಹತೆಗೆ 13 ವರ್ಷಗಳ ಹಿಂದಿನ ಆದಾಯದ ಮಾನದಂಡವನ್ನೇ ಇಂದಿಗೂ ಪಾಲಿಸಿಕೊಂಡು ಬರುತ್ತಿರುವುದು ತೀರ ಅವೈಜ್ಞಾನಿಕ.
ರಾಜ್ಯದ ಹಲವಾರು ಬಿಪಿಎಲ್ ಕುಟುಂಬಗಳು ಕೇವಲ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊರತು ಪಡಿಸಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ ಯೋಜನೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶಿಕ್ಷಣ ಶುಲ್ಕ ಸಹಿತ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅವಲಂಬಿತವಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 29 ತಿಂಗಳು ಕಳೆದರೂ ಈವರೆಗೆ ಒಂದೇ ಒಂದು ಬಿಪಿಲ್ ಕಾರ್ಡ್ ಅರ್ಹರಿಗೆ ನೀಡಿಲ್ಲ ಹಾಗೂ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶವನ್ನೇ ನೀಡಿಲ್ಲ.
ರಾಜ್ಯ ಸರ್ಕಾರ ತನ್ನ ಆರ್ಥಿಕ ದಿವಾಳಿತನದ ಹೊರೆಯನ್ನು ತಪ್ಪಿಸಿಕೊಳ್ಳಲು ಬಿಪಿಎಲ್ ಕಾರ್ಡ್ ರದ್ದು ಮಾಡಲು ಹೊರಟ ತನ್ನ ನಿರ್ಧಾರವನ್ನು ತಕ್ಷಣ ಹಿಂಪಡೆಯಲು ಮುಂದಾಗಬೇಕು ಎಂದು ಶಾಸಕ ಯಶ್ ಪಾಲ್ ಸುವರ್ಣ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.