ಉಡುಪಿ ಅಂಬಾಗಿಲು ಬಳಿ ಲಾರಿ ಪಲ್ಟಿ : ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ;ವಿಶು ಶೆಟ್ಟಿ
ಉಡುಪಿ : ಉಡುಪಿ ಅಂಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಜರಿ ಸಾಮಾನುಗಳನ್ನು ಕೊಂಡೊಯ್ಯುತ್ತಿದ್ದ ಲಾರಿ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದರಲ್ಲಿದ್ದ ಕಾರ್ಮಿಕರು ಸೇರಿ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ದುರ್ಘಟನೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಲಾರಿ ಚಾಲಕ, ನಾಲ್ಕು ಮಂದಿ ಕಾರ್ಮಿಕರು ಹಾಗೂ ಬೈಕ್ ಸವಾರನನ್ನು ತಮ್ಮ ವಾಹನದಲ್ಲಿಯೇ ಕರೆದೊಯ್ದು ಅಂಬಲಪಾಡಿ ಜಂಕ್ಷನ್ ಬಳಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದಿದ್ದಾರೆ.ಈ ದುರ್ಘಟನೆ ಸಂಭವಿಸುವ ಮುಂಚೆ ಅದೇ ಸ್ಥಳದಲ್ಲಿ ಬೈಕ್ ಸವಾರನೊಬ್ಬ ತನ್ನ ಬೈಕ್ ನಿಲ್ಲಿಸಿ ಪಕ್ಕದಲ್ಲಿ ನಿಂತಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾನೆ.ಆದರೆ ಈತನ ಬೈಕ್ ಮಾತ್ರ ಲಾರಿಯ ಅಡಿಗೆ ಬಿದ್ದು ನಜ್ಜುಗುಜ್ಜಾಗಿದೆ. ಪ್ರಕರಣದ ಬಗ್ಗೆ ಉಡುಪಿ ಸಂಚಾರಿ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.