ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ
ಸಂಭವಿಸಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಜುಲೈ 25 ರ ಗುರುವಾರದಂದು 10 ನೇ ದಿನಕ್ಕೆ ತಲುಪಿದ್ದು, ಈ ದಿನ ಬಹು ಜನರಿಗೆ ಯಶಸ್ಸಿನ ನಿರೀಕ್ಷೆ ಇತ್ತಾದರೂ, ಆ ಮಟ್ಟದ ಕಾರ್ಯಾಚರಣೆ ಸಾಧ್ಯವಾಗದೇ ನಾಳೆ ದಿನದ ವರೆಗೂ ಕಾಯುವಂತಾಗಿದೆ.
ಈ ದಿನದ ಕಾರ್ಯಾಚರಣೆಯಲ್ಲಿ ನದಿ ನೀರಿನಲ್ಲಿ ಹುದುಗಿರಬಹುದಾದ ಲಾರಿ ಮತ್ತು ನಾಪತ್ತೆಯಾದವರ ಪತ್ತೆ ಕಾರ್ಯಚರಣೆ ನೇತೃತ್ವ ವಹಿಸಿದ್ದ ನಿವೃತ್ತ ಮೇಜರ್ ಜನರಲ್, ಇಂದ್ರಬಾಲನ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,ಡೋನ್ ಮತ್ತಿತರ ಆಧುನಿಕ ತಂತ್ರಜ್ಞಾನ ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಒಟ್ಟೂ 4 ಕಡೆ ಮೆಟಲ್ ಅಂಶಗಳಿದ್ದು, ವಿದ್ಯುತ್ ಟವರ್ ಕಂಬ, ಅಂಗಡಿ ಮುಂಗಟ್ಟಿನ ಕಬ್ಬಿಣದ ರೇಲಿಂಗ್ಸ್ ಗಳು ಹಾಗೂ ಅರ್ಜುನ್ ಇದ್ದರು ಎನ್ನಲಾದ ಲಾರಿ, ಹಾಗೂ ಸಗಡಗೇರಿಯಲ್ಲಿ ಪತ್ತೆಯಾದ ಗ್ಯಾಸ್ ಟ್ಯಾಂಕರ್ ನಿಂದ ಬೇರ್ಪಟ್ಟ ಲಾರಿಯ ಕ್ಯಾಬಿನ್ ನಿಖರವಾಗಿ ಪತ್ತೆಯಾಗಬೇಕಿದೆ ಎಂದರು,
ಬೆಂಜ್ ಲಾರಿಯಲ್ಲಿ ಕಟ್ಟಿಗೆಗಳು ತುಂಬಿರುವುದರಿಂದ ಹಾಗೂ ಗಾಳಿ ನಿರೋಧಕ ಕ್ಯಾಬಿನ್ ಹೊಂದಿರುವುದರಿಂದ ಲಾರಿಯು ಬಿದ್ದ ಸ್ಥಳದಿಂದ ತೇಲಿ ಹೋಗುವ ಸಾಧ್ಯತೆಗಳಿದ್ದವು. ಆದರೆ ದುರಂತ ಸಂಭವಿಸಿದ ಸ್ಥಳದಿಂದ ಅಂದರೆ ಗುಡ್ಡದ ಮಣ್ಣು ನದಿಗೆ ಬಿದ್ದ ಸ್ಥಳದಿಂದ 500 ಮೀಟರ್ ದೂರದಲ್ಲಿ ಕಟ್ಟಿಗೆಗಳು ಬೇರ್ಪಡೆಯಾಗಿರುವ ಗುರುತು ಸಿಕ್ಕಿರುವುದರಿಂದ ಲಾರಿಯು ತೇಲಿ ಹೋಗಿರುವ ಸಾಧ್ಯತೆ ಇಲ್ಲವೆಂದು ಖಚಿತವಾಗಿದೆ. ಹಾಗಾಗಿ ನಿನ್ನೆಯ ಎರಡು ಸ್ಥಳಗಳು ಮತ್ತು ಇಂದು ಶೋಧಿಸಿದ ಒಂದು ಸ್ಥಳ ಸೇರಿದಂತೆ ಮೂರರಲ್ಲಿ ಅತ್ಯಂತ ಆಳ ಮತ್ತು ದೂರದಲ್ಲಿರುವ ಸ್ಥಳದಲ್ಲಿ ಬೆಂಜ್ ಲಾರಿ ಇದೆ. ರಸ್ತೆಯಿಂದ ಸುಮಾರು 60 ಮೀಟರ್ ದೂರದಲ್ಲಿ ನದಿಯಲ್ಲಿದೆ ಎನ್ನುವುದು ವಿಶ್ಲೇಷಣೆಯಿಂದ ತಿಳಿದು ಬರುತ್ತದೆ ಎಂದರು.
ಚಾಲಕ ಅರ್ಜುನ್ ಲಾರಿಯ ಕ್ಯಾಬಿನ್ ನಟ್ ಬೋಲ್ಟ್ ನಿಂದ ಜೋಡಿಸಲ್ಪಟ್ಟಿರುವುದರಿಂದ ಇತರೆ ಸಾಮಾನ್ಯ ಲಾರಿ ಅಥವಾ ಕಂಟೇನರ್ ಗಳಂತೆ ಕ್ಯಾಬಿನ್ ಬೇರ್ಪಡಲು ಸಾಧ್ಯವಿಲ್ಲ ಎಂದು ವಾಹನ ತಯಾರಿಕಾ ಬೆಂಜ್ ಕಂಪನಿಯ ತಜ್ಞರು ಹೇಳುತ್ತಾರೆ. ಲಾರಿಯ ಕ್ಯಾಬಿನ್ ಒಳಗಡೆ ಇರಬಹುದಾದ ಆಕ್ಸಿಜನ್ ಪ್ರಮಾಣವನ್ನು ಆಧರಿಸಿ ಚಾಲಕ ಎಷ್ಟು ದಿನ ಬದುಕಬಹುದು ಎಂದು ಅಂದಾಜಿಸಬಹುದು. ಆದರೆ ಇದುವರೆಗೆ ಚಾಲಕ ಲಾರಿಯ ಒಳಗಿರುವ ಕುರಿತು ಸುಳಿವು ಪತ್ತೆಯಾಗಿಲ್ಲ ಹಾಗಾಗಿ ಥರ್ಮಲ್ ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಸುಳಿವು ಪತ್ತೆಯ ಕಾರ್ಯ ತಡರಾತ್ರಿಯು ಮುಂದುವರೆಯುವುದು.
ನಂತರ ಒಂದು ವೇಳೆ ಲಾರಿಯೊಳಗಡೆ ಚಾಲಕನಿರುವುದಾದರೆ ಮುಳುಗು ತಜ್ಞರು ಅಥವಾ ರಕ್ಷಣೆಗೆ ತೆರಳುವ ವ್ಯಕ್ತಿಯ ಕುರಿತು ಯೋಚಿಸಬೇಕಾಗುತ್ತದೆ. ಯಾವ ಮಾರ್ಗದಲ್ಲಿ ರಕ್ಷಣೆ ಸಾಧ್ಯವಾಗುತ್ತದೆ ಎನ್ನುವುದನ್ನು ವಿಶ್ಲೇಷಣೆ ಮಾಡಬೇಕಿದೆ. ನದಿಯ ಜೋರಾದ ಹರಿವಿನ ಪ್ರಮಾಣ, ನದಿಯ ಆಳದಿಂದ ರಕ್ಷಣೆ ಮಾಡಲು ಹೋದವರಿಗೆ ಅಪಾಯವಾಗುವ ಸಾಧ್ಯತೆ ಇದ್ದು, ಈ ಕುರಿತು ಸೌಕಾದಳ ದವರೊಂದಿಗೆ ಸಮಾಲೋಚನೆ ನಡೆಸಲಾಗುವುದು.ನಮ್ಮ ದೇನಿದ್ದರೂ ನದಿಯಲ್ಲಿ ಮುಳುಗಿರಬಹುದಾದ ಲಾರಿ ಮತ್ತಿತರ ಅಂಶಗಳನ ಗುರುತಿಸುವುದಾಗಿದೆ ಎಂದು ಇಂದ್ರಬಾಲನ್ ಹೇಳಿದರು.