ಪುತ್ತೂರು: 80 ವರ್ಷಗಳ ಹಿಂದೆ ಪುತ್ತೂರಿನ ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ಬದಲಾವಣೆ ತರುವ ಮೂಲಕ ಸಂತ ಫಿಲೋಮಿನಾ ವಿದ್ಯಾಸಂಸ್ಥೆ ತಾಲೂಕಿನ ಶಿಕ್ಷಣ ವ್ಯವಸ್ಥೆಗೆ ಗಟ್ಟಿಯಾದ ಅಡಿಪಾಯ ಹಾಕಿದೆ.
ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲೆಯನ್ನು ಮೊದಲ ಬಾರಿಗೆ ಸ್ಥಾಪಿಸಿದೆ. ಇದು ಅತೀ ವಂ. ಆ್ಯಂಟನಿ ಪತ್ರಾವೊ ಅವರ ಸ್ಮರಣೀಯ ಕೊಡುಗೆಯಾಗಿದೆ. ನಂತರ ಪ್ರಾರಂಭವಾದ ಫಿಲೋಮಿನಾ ಕಾಲೇಜು ಕೂಡಾ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡಮಟ್ಟದ ಕೊಡುಗೆ ನೀಡಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್ ಹೇಳಿದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1939ರಲ್ಲಿ ಪುತ್ತೂರಿಗೆ ಬಂದ ರೆ.ಫಾ. ಆ್ಯಂಟನಿ ಪತ್ರಾವೋ ಅವರು 1942ರಲ್ಲಿ ಸೈಂಟ್ ವಿಕ್ಚರ್ಸ್ ಶಾಲೆ ಸ್ಥಾಪಿಸಿದರು. ಮೊದಲ ಬಾಲಿಕಾ ಪ್ರೌಢಶಾಲೆ ಸ್ಥಾಪಿಸಿದ ಕೀರ್ತಿ ಇವರದು. ಜಿಲ್ಲೆಯ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳ ಪೈಕಿ ಸಂತ ಫಿಲೊಮಿನಾ ಕಾಲೇಜಿಗೆ ಮೊದಲ ಬಾರಿ ಈಗ ಸ್ವಾಯತ್ತ ಕಾಲೇಜಿನ ಮಾನ್ಯತೆ ಸಿಕ್ಕಿದೆ. ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಹೊಸ ಕೋಸ್‌ರ್ಗಳನ್ನು ಆರಂಭಿಸಲಾಗುವುದು ಎಂದವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ವಂ.ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಕಾಲೇಜಿನ ಪ್ರಗತಿಯಲ್ಲಿ ಪೋಷಕರು ಮತ್ತು ಮಾಧ್ಯಮಗಳ ಪಾತ್ರ ಹಿರಿದಾದುದು ಎಂದರು.
ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ಇಂಗ್ಲೀಷ್ ಪ್ರಾಧ್ಯಾಪಕಿ ಭಾರತಿ ಎಸ್. ರೈ ಉಪಸ್ಥಿತರಿದ್ದರು.