October 21, 2025
img-20251005-wa00461445550274570946830.jpg

ಉಡುಪಿ : ಮಾನಸಿಕ ಖಿನ್ನತೆಗೆ ಒಳಗಾಗಿ ಕಳೆದ ಮೂರು ದಿನಗಳಿಂದ ಉಡುಪಿ ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಅಲೆಯುತ್ತಿದ್ದ ಗುರುಪ್ರಸಾದ್ ಭಟ್ (60) ಎಂಬವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸ್ಥಳೀಯರ ಸಹಕಾರದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ವ್ಯಕ್ತಿಯ ಸಂಬಂಧಿಕರು ಪತ್ತೆಯಾದ ಹಿನ್ನಲೆಯಲ್ಲಿ ಅವರನ್ನು ಕುಟುಂಬದ ವಶಕ್ಕೆ ಒಪ್ಪಿಸಲಾಗಿದೆ.

ಗುರುಪ್ರಸಾದ್ ಭಟ್ ಅವರು ಮೂಲತಃ ಉಡುಪಿ ಮೂಲದವರೇ ಅದರೂ ಮೈಸೂರಲ್ಲಿ ನೆಲೆಸಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಕೆಲವು ದಿನಗಳಿಂದ ಔಷಧಿ ಸೇವಿಸದೆ ಮಾನಸಿಕ ಉದ್ವೇಗಕ್ಕೆ ಒಳಗಾಗಿ ಮನೆ ಬಿಟ್ಟು ಉಡುಪಿಗೆ ಬಂದಿದ್ದರು.

ಬಾಳಿಗಾ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್‌ ಮಾಡುತ್ತಿದ್ದಾಗ ಆಸ್ಪತ್ರೆಯ ಸಿಬ್ಬಂದಿಗೆ ತಮ್ಮ ಮನೆಯ ವಿಳಾಸ, ಸಂಪರ್ಕ ಸಂಖ್ಯೆ ನೀಡಿದ್ದಾರೆ. ಅಂತೆಯೇ ಆಸ್ಪತ್ರೆಯಿಂದ ಮಾಹಿತಿ ಪಡೆದ ಗುರುಪ್ರಸಾದ್ ಭಟ್ ಅವರ ಪತ್ನಿ ಉಡುಪಿಗೆ ಬಂದಿದ್ದು ವಿಶು ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಗುರುಪ್ರಸಾದ್ ಅವರನ್ನು ಅವರ ವಶಕ್ಕೆ ಒಪ್ಪಿಸಲಾಯಿತು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ವ್ಯಕ್ತಿಗೆ ಉತ್ತಮ ಕೌನ್ಸಿಲಿಂಗ್‌ ಮಾಡಿ ಸಂಬಂಧಿಕರನ್ನು ಪತ್ತೆಮಾಡಿ ಕ್ಷೇಮವಾಗಿ ಅವರ ವಶಕ್ಕೆ ನೀಡಿದ ಬಾಳಿಗಾ ಆಸ್ಪತ್ರೆಯ ಸಿಬ್ಬಂದಿಗಳಿಗೆ ವಿಶು ಶೆಟ್ಟಿ ಹಾಗೂ ಗುರುಪ್ರಸಾದ್‌ ಭಟ್ ಅವರ ಸಂಬಂಧಿಕರು ಕೃತಜ್ಞತೆ ಅರ್ಪಿಸಿದ್ದಾರೆ.

ಯಾವುದೋ ಕಾರಣಕ್ಕೆ ಮಾನಸಿಕ ಅಸ್ವಸ್ಥೆಗೆ ಒಳಗಾದ ವ್ಯಕ್ತಿಗಳ ಬಗ್ಗೆ ತಾತ್ಸಾರ ಮಾಡದೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಸೇರಿಸಿದಂತಾಗುತ್ತದೆ. ಸಮಾಜ ಇದನ್ನು ಗಮನಿಸಬೇಕು.ತನ್ನ ಕೈಲಾದ ಸಹಾಯ ಮಾಡಬೇಕು ಎಂದು ವಿಶು ಶೆಟ್ಟಿ ಮನವಿ ಮಾಡಿದ್ದಾರೆ.

ಪ್ರಕರಣದ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ.

ವ್ಯಕ್ತಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ಸತೀಶ್‌ ಸುವರ್ಣ ಹಾಗೂ ಹರೀಶ್ ಅಂಬಲಪಾಡಿ ಸಹಕರಿಸಿದ್ದರು.

About The Author

Leave a Reply

Your email address will not be published. Required fields are marked *