ಉಡುಪಿ ಜಿಲ್ಲೆ ಬೈಂದೂರು ತಾಲೂಕು ಹಲವಾರು ವರ್ಷಗಳಿಂದ ಉಪ್ಪು ನೀರಿನ ಹಾವಳಿಯಿಂದ ಕಂಗೆಟ್ಟಿದ್ದ ಬೈಂದೂರು ತಾಲೂಕಿನ ಆರು ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ಸುಮನಾವತಿ ನದಿಗೆ ಅಡ್ಡಲಾಗಿ ಪಡುವರಿ ಗ್ರಾಮದ ಸುಬ್ಬರಡಿ ಬಳಿ ಸುಮಾರು 35 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ವೆಂಟೆಡ್ ಡ್ಯಾಂ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ನಾಲ್ಕು ವರ್ಷದ ಹಿಂದೆ ಈ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಸುಮಾರು 230 ಮೀ ಉದ್ದದ ಬೃಹತ್ ಕಿಂಡಿ ಅಣೆಕಟ್ಟು, 2 ಕಿ.ಮೀ. ದೂರದ ಸಂಪರ್ಕ ರಸ್ತೆ ನಿರ್ಮಾಣ, ನದಿಯ ಒಂದು ಬದಿಯಲ್ಲಿ ನದಿದಂಡೆ ಸಂರಕ್ಷಣೆ ಹಾಗೂ ಸುಮಾರು 240 ಮೀ. ಉದ್ದದ ರಿವಿಟ್ ಮೆಂಟ್ ಕಾಮಗಾರಿ ಪೂರ್ಣಗೊಂಡಿದ್ದು, ನೂತನ ಕಿಂಡಿ ಅಣೆಕಟ್ಟಿಗೆ ಯಾಂತ್ರೀಕೃತ ಕ್ರೆಸ್ಟ್‌ಗೇಟ್ ಅಳವಡಿಸಲಾಗಿದೆ. ಸುಮನಾವತಿ ನದಿಯ ಉಪ್ಪು ನೀರಿನ ಹಾವಳಿ ತಪ್ಪಿಸಲು ಸುಬ್ಬರಡಿ ಬಳಿ ವೆಂಟೆಡ್ ಡ್ಯಾಂ ನಿರ್ಮಿಸುವಂತೆ ಈ ಭಾಗದವರು ಹಲವಾರು ವರ್ಷಗಳಿಂದ ಸಂಬಂಧಿತರಿಗೆ ಮನವಿ ಸಲ್ಲಿಸುತ್ತಿದ್ದರು.
ಜನರ ಬೇಡಿಕೆಗಳಗೆ ತಕ್ಷಣ ಸ್ಪಂದಿಸಿದ ಸಂಸದ ಬಿ.ವೈ ರಾಘವೇಂದ್ರ.ಉಪ್ಪು ನೀರಿಗೆ ತಡೆಯೋಡ್ಡಿ ನದಿಗೆ ಇನ್ನೊಂದು ಮಗ್ಗಲಲ್ಲಿ ಬೆನ್ನೂರು ಭಾಗದಿಂದ ಉಪ್ಪು ನೀರು ಹರಿದು ಬರುವುದರಿಂದ ಅದನ್ನು ತಡೆಗಟ್ಟಲು ಅಲ್ಲಿ ಮತ್ತೊಂದು ಚಿಕ್ಕದಾದ ಕಿಂಡಿಅಣೆಕಟ್ಟು ನಿರ್ಮಾಣ ಮಾಡಿದಾಗ ಮಾತ್ರ ಸುಮನಾವತಿ ನದಿಯಲ್ಲಿ ಹಿನ್ನೀರು ಶೇಖರಣೆಗೊಂಡು ಆರು ಗ್ರಾಮದ ನಿವಾಸಿಗಳಿಗೆ ಉಪಯುಕ್ತವಾಗುತ್ತದೆ. ಈ ಕಾಮಗಾರಿಗೂ ಕೂಡ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸಂಸದ ಬಿ ವೈ ರಾಘವೇಂದ್ರ, ಈ ಆರು ಗ್ರಾಮಗಳ ಜನರಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಬ್ಬರಡಿ ಯೋಜನೆಯ ನೀಲಿನಕ್ಷೆ ತಯಾರಿಸಿ ಚಾಲನೆ ನೀಡಿದ್ದೂ ಅಲ್ಲದೇ ವಿಶೇಷ ಮುತುವರ್ಜಿ ವಹಿಸಿ ಕಾಮಗಾರಿ ಗುಣಮಟ್ಟಗಳ ಕುರಿತು ನಿಗಾವಹಿಸಿದ್ದರು. ಪ್ರಸಕ್ತ ಬಹುಕಾಲದ ಬೇಡಿಕೆ ಈಡೇರಿರುವ ಬಗ್ಗೆ ಈ ಭಾಗದ ಜನರು ಸಂಸದರಿಗೆ ಮತ್ತು ಶಾಸಕರಿಗೂ ಕೃತಜ್ಞತೆ ಸಲ್ಲಿಸುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನದಿಯ ಹಿನ್ನೀರಿನ ಸಂಗ್ರಹಕ್ಕೆ ಅಲ್ಲಲ್ಲಿ ವಾಲ್ ನಿರ್ಮಿಸುವುದು, ನದಿಯಲ್ಲಿ ಹೂಳೆತ್ತಲು ಅಗತ್ಯ ಕ್ರಮ ಕೈಗೊಂಡರೆ ಮಾತ್ರ ಅಣೆಕಟ್ಟಿನಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ