Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಉಡುಪಿ: 6 ತಾಲೂಕು ಕಚೇರಿಗಳಿಗೆ ಏಕಕಾಲದ ಲೋಕಾಯುಕ್ತ ದಾಳಿ..

ಉಡುಪಿ: ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಹೊರತುಪಡಿಸಿ ಉಳಿದ ಆರು ತಾಲೂಕು ಕಚೇರಿಗಳಿಗೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿ, ಬಾಕಿ ಕಡತಗಳು ಹಾಗೂ ಕಡತ ವಿಲೇವಾರಿಯಲ್ಲಿನ ವಿಳಂಬದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಕರ್ನಾಟಕ ಲೋಕಾಯುಕ್ತರು ಸಾರ್ವಜನಿಕ ದೂರಿನ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಿದ್ದರು. ಅದರಂತೆ ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಲೋಕಾಯುಕ್ತ ಪೊಲೀಸರ ಆರು ತಂಡಗಳು ಏಕಕಾಲದಲ್ಲಿ ಉಡುಪಿ, ಕುಂದಾಪುರ, ಕಾಪು, ಕಾರ್ಕಳ, ಬೈಂದೂರು ಹಾಗೂ ಹೆಬ್ರಿ ತಾಲೂಕು ಕಚೇರಿಗಳಿಗೆ ತೆರಳಿ ದಾಖಲೆಗಳ ಪರಿಶೀಲನೆ ಆರಂಭಿಸಿವೆ.

ಕಾರ್ಯಾಚರಣೆಯಲ್ಲಿ ಉಡುಪಿ ಮತ್ತು ಮಂಗಳೂರಿನ ತಲಾ ಡಿವೈಎಸ್ಪಿ ಸೇರಿದಂತೆ ಒಟ್ಟು ಇಬ್ಬರು ಡಿವೈಎಸ್ಪಿಗಳು, ಉಡುಪಿಯ ಒಬ್ಬರು, ಮಂಗಳೂರಿನ ನಾಲ್ವರು ಹಾಗೂ ಕಾರವಾರದ ಒಬ್ಬರು ಪೊಲೀಸ್‌ ನಿರೀಕ್ಷಕರ ತಂಡಗಳು ಭಾಗವಹಿಸಿವೆ.

ಲೋಕಾಯುಕ್ತ ಉಡುಪಿ ಡಿವೈಎಸ್ಪಿ ಹಾಲಮೂರ್ತಿ ರಾವ್ ಅವರ ನೇತೃತ್ವದಲ್ಲಿ ಹೆಬ್ರಿ ತಾಲೂಕು ಕಚೇರಿಯಲ್ಲಿಯೂ ಕಡತಗಳ ಪರಿಶೀಲನೆ ನಡೆಯುತ್ತಿದೆ.

ತಾಲೂಕು ಕಚೇರಿಗಳಲ್ಲಿ ಬಾಕಿ ಉಳಿದಿರುವ ಕಡತಗಳು, ಕಡತ ವಿಲೇವಾರಿಯಲ್ಲಿ ಆಗಿರುವ ವಿಳಂಬ, ಸಾರ್ವಜನಿಕರಿಂದ ಬಂದಿರುವ ಇತರ ದೂರುಗಳು ಸೇರಿದಂತೆ ವಿವಿಧ ಅಂಶಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಹಲವು ಪ್ರಮುಖ ಕಡತಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ..

ಇನ್ನು, ಸುಮಾರು ಎರಡು ತಿಂಗಳ ಹಿಂದಷ್ಟೇ ಬ್ರಹ್ಮಾವರ ತಾಲೂಕು ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಬ್ರಹ್ಮಾವರ ತಾಲೂಕು ಕಚೇರಿಯನ್ನು ಕಾರ್ಯಾಚರಣೆಯಿಂದ ಹೊರಗಿಟ್ಟು ಜಿಲ್ಲೆಯ ಉಳಿದ ಆರು ತಾಲೂಕು ಕಚೇರಿಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆಸಲಾಗಿದೆ.

About The Author

Leave a Reply

Your email address will not be published. Required fields are marked *