
ಹೌದು, ಕೋಟೇಶ್ವರದ ಕೋಟಿ ಲಿಂಗೇಶ್ವರ ದೇವಸ್ಥಾನದ ಸ್ವಾಧೀನದಲ್ಲಿರುವ ಜಾಗದಲ್ಲಿ ಸುಮಾರು ನಾಲ್ಕು ದಶಕಗಳಿಂದ ರಿಕ್ಷಾ ಚಾಲಕರು ಸಾರ್ವಜನಿಕ ಸೇವೆ ನೀಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ಕಟ್ಟಡದ ಎದುರು ಇರುವ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವ ಸಂಬಂಧ ಕಟ್ಟಡದ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ
ರಿಕ್ಷಾ ಚಾಲಕರ ಹೇಳಿಕೆಯ ಪ್ರಕಾರ, ಜಾಗಕ್ಕೆ ಸಂಬಂಧಿಸಿದ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಅಧ್ಯಕ್ಷರಿಂದ ಯಾವುದೇ ತೊಂದರೆ ಎದುರಾಗಿಲ್ಲ. ಆದರೆ ಖಾಸಗಿ ವ್ಯಕ್ತಿಯೊಬ್ಬರ ಒತ್ತಡದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯ ಕುರಿತು ತಮಗೆ ಸಮರ್ಪಕ ಮಾಹಿತಿ ಇಲ್ಲ. ತಮ್ಮ ಪರವಾಗಿ ಯಾವುದೇ ರೀತಿಯ ವಾದ ಮಂಡಿಸಲು ಅವಕಾಶವೂ ಸಾಧ್ಯವಿಲ್ಲ ಎಂದು ಬಡ ರಿಕ್ಷಾ ಚಾಲಕರು ಮಾಧ್ಯಮದ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ನಲವತ್ತು ವರ್ಷಗಳಿಂದ ಜೀವನೋಪಾಯದ ಕೇಂದ್ರವಾಗಿರುವ ರಿಕ್ಷಾ ನಿಲ್ದಾಣವನ್ನು ತೆರವು ಮಾಡದೆ ಉಳಿಸಿಕೊಡಬೇಕು ಹಾಗೂ ತಮ್ಮ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಬಾರದು ಎಂದು ರಿಕ್ಷಾ ಚಾಲಕರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ದೇವಸ್ಥಾನದ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಹಾಗೂ ಇಂದು ಶನಿವಾರ ಬೆಳಗ್ಗೆ ರಿಕ್ಷಾ ಚಾಲಕರು ಕುಂದಾಪುರ ತಾಲೂಕು ಕರವೇ ಅಧ್ಯಕ್ಷ ಶಿವ ಆರ್. ಪೂಜಾರಿ ಮತ್ತು ಕರವೇ ಸೈನಿಕರಿಗೆ ಮನವಿ ನೀಡಿ, ನಮಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿಯಲ್ಲಿ ಕೇಳಿಕೊಂಡರು.
